ಆಕ್ಸಿಅಸಿಟಿಲೀನ್  ಜ್ವಾಲೆ
		
ಅಸಿಟಿಲೀನ್ ಅನಿಲದ ದಹಿಸುವಿಕೆ ಅತ್ಯಂತ ಉಷ್ಣಜನಕ ಕ್ರಿಯೆ. ಅಸೆಟಲಿನ್ ದಹಿಸಿ ಸಂಪೂರ್ಣವಾಗಿ ಇಂಗಾಲದ ಡೈ ಆಕ್ಸೈಡ್ ಮತ್ತು ನೀರನ್ನು ಉತ್ಪತ್ತಿ ಮಾಡುವಾಗ 

          2C2H2 + 5 O2 ( 4 CO2 + 2 H2O

ಒಂದು ಗ್ರಾಂ ಅಸಿಟಿಲೀನಿಗೆ 12 ಸಾವಿರ ಕ್ಯಾಲೊರಿಗಳಷ್ಟು ಉಷ್ಣ ಬಿಡುಗಡೆಯಾಗುತ್ತದೆ. ಆಕ್ಸಿಅಸೆಟಲಿನ್ ಜ್ವಾಲೆಯಲ್ಲಿ ಈ ದಹನಕ್ರಿಯೆಯನ್ನು ಉಪಯೋಗಿಸಿಕೊಂಡು ಅಧಿಕ ಉಷ್ಣತೆಯಿರುವ ಜ್ವಾಲೆಯನ್ನು ಉತ್ಪತ್ತಿಮಾಡುತ್ತಾರೆ. 

ಚಿತ್ರ-1

ಎರಡು ಸಹಾಕ್ಷೀಯ ನಳಿಗೆಗಳಲ್ಲಿ (ಕೊ- ಆಕ್ಸಿಯಲ್ ಟ್ಯೂಬ್‍ಗಳು) ಒಳಗಿನ ನಳಿಗೆಯ ಮೂಲಕ ಆಕ್ಸಿಜನ್ನನ್ನೂ ಹೊರಗಿನದರ ಮೂಲಕ ಅಸೆಟಲಿನನ್ನೂ ಹಾಯಿಸಿ ಅವೆರಡೂ ಬೆರೆತುಕೊಂಡು ಒಂದು ಸೂಸುಬಾಯಿಯ (ನಾಸóಲ್) ಮೂಲಕ ಹೊರಬರುವಂತೆ ಮಾಡಿ ಆ ಅನಿಲ ಮಿಶ್ರಣವನ್ನು ಉರಿಸುವುದರಿಂದ ಅತ್ಯಧಿಕ ಉಷ್ಣತೆಯುಳ್ಳ ಜ್ವಾಲೆ ಉಂಟಾಗುತ್ತದೆ. ಜ್ವಾಲೆಯ ಉಷ್ಣತೆ 3,0000 ಸೆಂ.ಗ್ರೇ.ನಿಂದ 3,5000 ಸೆಂ.ಗ್ರೇ.ವರೆಗೂ ಇರಬಹುದು. ಈ ಜ್ವಾಲೆಯಲ್ಲಿ ದಹನಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತದೆ. ಸೂಸುಬಾಯಿಯ ಮುಖದ ಬಳಿ ಕಾಣುವ ಪ್ರಕಾಶಮಾನವಾದ ಒಳವಲಯದಲ್ಲಿ ದಹನದ ಮೊದಲನೆಯ ಹಂತ ನಡೆಯುತ್ತದೆ.

		C2H2 + O2 ( 2CO + H2 + 4,200 ಕ್ಯಾ./ಗ್ರಾಂ 

ಜ್ವಾಲೆಯ ಹೊರವಲಯದಲ್ಲಿ ದಹನದ ಎರಡನೆಯ ಹಂತ ನಡೆಯುತ್ತದೆ. 

	2CO + H2 +  1/2 O2 (  2CO2 + H2O + 7,800 ಕ್ಯಾ./ಗ್ರಾಂ 

		ಆಕ್ಸಿಅಸಿಟಲೀನ್ ಜ್ವಾಲೆಯನ್ನು ಮೂರು ಬೇರೆ ಬೇರೆ ಬಗೆಯಲ್ಲಿ ಉತ್ಪತ್ತಿ ಮಾಡಿಕೊಂಡು ಬಳಸುವುದುಂಟು. ಆಕ್ಸಿಜನ್ ಪ್ರಮಾಣವನ್ನು ಹೆಚ್ಚು ಮಾಡಿದಾಗ ಜ್ವಾಲೆಯ ಪ್ರಕಾಶಮಾನವಾದ ಒಳವಲಯ ಮೊಟಕಾಗಿಯೂ ಚೂಪಾಗಿಯೂ ಇದ್ದು ಜ್ವಾಲೆಯ ಉಷ್ಣತೆ ಸಾಮಾನ್ಯ ಜ್ವಾಲೆಗಿಂತ ಅಧಿಕವಾಗಿರುತ್ತದೆ. ಅಂಥ ಜ್ವಾಲೆಯ ಹೆಸರು ಉತ್ಕರ್ಷಕಾರೀ ಆಕ್ಸಿಅಸಿಟಲೀನ್ ಜ್ವಾಲೆ. ಏಕೆಂದರೆ, ಅದರಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಾಗಿದ್ದು, ಜ್ವಾಲೆಯ ವರ್ತನೆಗೆ ಒಳಗಾಗುವ ಲೋಹಭಾಗಗಳು ಉತ್ಕರ್ಷಣೆ (ಆಕ್ಸಿಡೇಷನ್) ಹೊಂದುತ್ತವೆ. ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದು, ಅಸಿಟಲೀನ್ ಪ್ರಮಾಣ ಹೆಚ್ಚಾದಾಗ, ಜ್ವಾಲೆಯ ಒಳವಲಯ ದಪ್ಪವಾಗಿಯೂ ಮೊಂಡಾಗಿಯೂ ಇದ್ದು, ಇಂಥ ಜ್ವಾಲೆಯಲ್ಲಿ ಹೊರ ಒಳ ವಲಯಗಳ ನಡುವೆ ಮೂರನೆಯ ಮಧ್ಯವಲಯ ಒಂದಿರುತ್ತದೆ. ಈ ವಲಯದ ಆಕಾರವನ್ನು ನೋಡಿ ಇದನ್ನು ಗರಿ (ಫೆದರ್) ಎಂದು ಕರೆದಿದ್ದಾರೆ. ಈ ಅಪಕರ್ಷಕಾರೀ ಆಕ್ಸಿಅಸಿಟಲೀನ್ ಜ್ವಾಲೆಯ ಗರಿಯಲ್ಲಿರುವ ಬಿಳಿಗಾವಿಗೆ (ವೈಟ್ ಹಾಟ್) ಕಾದ ಇಂಗಾಲದ ಕಣಗಳು ಕರಗಿದ ಲೋಹದೊಡನೆ ಲೀನವಾಗಿಬಿಡುವುದರಿಂದ ಈ ಜ್ವಾಲೆಯನ್ನು ಕಾರ್ಬನೀಕಾರೀ (ಕಾರ್ಬುರೈಸಿಂಗ್) ಜ್ವಾಲೆ ಎಂದೂ ಕರೆದಿದ್ದಾರೆ. ಸಹಜವಾಗಿಯೇ ಈ ಜ್ವಾಲೆಯ ಉಷ್ಣತೆ ಸಾಮಾನ್ಯ ಜ್ವಾಲೆಗಿಂತ ಕಡಿಮೆ ಇರುತ್ತದೆ. ಈ ಎರಡು ಬಗೆಯ ಆಕ್ಸಿಅಸಿಟಲೀನ್ ಜ್ವಾಲೆಗಳಿಗೂ ಮಧ್ಯ ಸ್ವಭಾವದ ಸಮ ಜ್ವಾಲೆಯಲ್ಲಿ ಆಕ್ಸಿಜನ್ ಅಸಿಟಲೀನ್‍ಗಳ ಪ್ರಮಾಣ ಸಮನಾಗಿರುತ್ತದೆಯೆಂಬುದು ಸ್ಪಷ್ಟ. 

		ಆಕ್ಸಿಅಸಿಟಲೀನ್ ಜ್ವಾಲೆಯನ್ನು ಬಳಸುವುದು ಮುಖ್ಯವಾಗಿ ಲೋಹ ಭಾಗಗಳನ್ನು ಬೆಸೆಯುವುದಕ್ಕೆ. ಈಚೆಗೆ ಸಾಧಿಸಿರುವ ತಾಂತ್ರಿಕ ಪ್ರಗತಿಯಿಂದಾಗಿ ಈ ಜ್ವಾಲೆಯನ್ನು ನಾನಾಬಗೆಯ ಕಾರ್ಯಗಳಿಗೆ ಬಳಸಲಾಗುತ್ತಿದೆ. ಉಜ್ಜಣಿ (ವೇರ್) ಮತ್ತು ರಾಸಾಯನಿಕ ವರ್ತನೆಗಳಿಗೆ ಒಳಗಾಗಬಹುದಾದ ಯಂತ್ರ ಭಾಗಗಳನ್ನು ರಕ್ಷಿಸಲು ಆ ಭಾಗಗಳಿಗೆ ಅಪಘರ್ಷ ನಿರೋಧಕ (ವೇರ್ ರೆಸಿಸ್ಟಿಂಗ್) ಮತ್ತು ರಾಸಾಯನ ನಿರೋಧಕ ಮಿಶ್ರ ಲೋಹಗಳ ತೆಳುಹೊದಿಕೆ ಕೊಟ್ಟು ಗಡಸು ಮುಖ (ಹಾರ್ಡ್‍ಫೇಸ್) ಒದಗಿಸಲು ಈ ಜ್ವಾಲೆಯನ್ನು ಬಳಸುತ್ತಾರೆ. ಕಬ್ಬಿಣ ಮತ್ತು ಉಕ್ಕಿನ ಸಾಮಾನುಗಳನ್ನು ನಿರ್ದಿಷ್ಟ ಆಕೃತಿಯಲ್ಲಿ ಕತ್ತರಿಸಬೇಕಾದಾಗ ಮೊನಚಾದ ಆಕ್ಸಿಅಸಿಟಲೀನ್ ಜ್ವಾಲೆಯನ್ನು ಉಪಯೋಗಿಸಿ ಸ್ಥಳೀಯವಾಗಿ ಅಧಿಕ ಉಷ್ಣ ಉಂಟು ಮಾಡಿ ಲೋಹವನ್ನು ಕರಗಿಸಿ ಕತ್ತರಿಸಬೇಕಾದ ಆಕೃತಿಯನ್ನು ಬೇರ್ಪಡಿಸಬಹುದು. ಬಣ್ಣ ಹಾಕಬೇಕಾಗಿರುವ ಉಕ್ಕಿನ ಮೈಮೇಲಿನ ತುಕ್ಕು ತೆಗೆದು ಸ್ವಚ್ಛಗೊಳಿಸುವುದು ಮರದ ಸಾಮಾನುಗಳಿಗೆ ಪ್ರಾಚೀನತೆಯ ತೋರ್ಕೆ ಕೊಡುವುದು, ಮರದ ಮೈಯನ್ನು ಕರಕುಮಾಡಿ ಮರದ ಸಾಮಾನುಗಳನ್ನು ಕಾಪಿಡುವುದು ಇವು ಆಕ್ಸಿಅಸಿಟಲೀನ್ ಜ್ವಾಲೆಯ ಕೆಲವು ಕುತೂಹಲಕಾರೀ ಉಪಯೋಗಗಳು.
 	
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ